+91 8255 262 062, 9964 157 352 info@vanadurga.in

ಮಹಿಷಮರ್ದಿನಿ ಸ್ತೋತ್ರ

ಅಯಿಗಿರಿ ನ೦ದಿನಿ ನ೦ದಿತಮೇದಿನಿ ವಿಶ್ವ ವಿನೋದಿನಿ ನ೦ದಿನುತೇ|

ಗಿರಿವರ ವಿ೦ಧ್ಯಶಿರೋಧಿ ನಿವಾಸಿನಿ ವಿಷ್ಣುವಿಲಾಸಿನಿ ಜಿಷ್ಣುನುತೇ|

ಭಗವತಿ ಹೇ ಶಿತಿಕ೦ಠ ಕುಟು೦ಬಿನಿ ಭೂರಿಕುಟು೦ಬಿನಿ ಭೂರಿಕೃತೇ|

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||1

ಪರ್ವತರಾಜ ಪುತ್ರಿಯೇ, ವ೦ದನೆಗಳು, ನಿನಗೆ ಜಯವಾಗಲಿ. ನೀನು ಸಮಸ್ತ ವಿಶ್ವಕ್ಕೆ ಆನ೦ದದಾಯಕಿ. ಇಡೀ ಜಗತ್ತು ನಿನ್ನ ದಿವ್ಯ ಆಟವಾಗಿದೆ. ನೀನು ನ೦ದಿಯಿ೦ದ ಸ್ತುತಿಸಲ್ಪಡುತ್ತೀಯೆ. ಗಿರಿಗಳಲ್ಲಿ ಶ್ರೇಷ್ಠವಾದ ವಿ೦ಧ್ಯಗಿರಿ ನಿನ್ನ ಆವಾಸ ಸ್ಥಾನವಾಗಿದೆ. ಶ್ರೀಮಹಾವಿಷ್ಣುವಿಗೆ ನೀನು (ತ೦ಗಿಯಾಗಿ) ಆನ೦ದ ನೀಡುತ್ತಿ. ಇ೦ದ್ರನಿ೦ದ ಸದಾ ಸ್ತುತಿಸಲ್ಪಡುತ್ತಿ. ಹೇ, ಭಗವತಿ, ನೀನು ನೀಲಕ೦ಠನ ಶಿವನ ಅರ್ಧಾ೦ಗಿ. ವಿಶ್ವವೇ ನಿನ್ನ ಕುಟು೦ಬ. ಸಮೃದ್ಧಿಯೇ ನಿನ್ನ ಸೃಷ್ಟಿ. ಜಯ, ಜಯ ದೇವಿ – ಮಹಿಷ ಮರ್ದಿನಿಯೇ, ಅತ್ಯ೦ತ ಸು೦ದರವಾಗಿ ಹೆಣೆದ ಜಡೆಯುಳ್ಳವಳೇ, ಪರ್ವತ ಪುತ್ರಿಯೇ ನಿನಗೆ ಜಯವಾಗಲಿ, ಜಯವಾಗಲಿ.

ಸುರವರ ವರ್ಷಿಣಿ ದುರ್ಧರ ಧರ್ಷಿಣಿ ದುರ್ಮುಖ ಮರ್ಷಿಣಿ ಹರ್ಷರತೇ|

ತ್ರಿಭುವನ ಪೋಷಿಣಿ ಶ೦ಕರ ತೋಷಿಣಿ ಕಿಲ್ಬಿಷ ಮೋಷಿಣಿ ಘೋಷರತೇ|

ದನುಜ ನಿರೋಷಿಣಿ ದಿತಿಸುತ ರೋಷಿಣಿ ದುರ್ಮದ ಶೋಷಿಣಿ ಸಿ೦ಧುಸುತೇ|

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||2||

ಹೇ ಜಗದ೦ಬೇ, ನೀನು ದೇವತೆಗಳಿಗೆ ಅನುಗ್ರಹ ಸುರಿಸುವವಳು. ದುರ್ಧರನೆ೦ಬ ರಾಕ್ಷಸನನ್ನು ಬಲಹೀನನಾಗಿಸಿದ್ದಿ: ದುರ್ಮುಖನೆ೦ಬ ರಾಕ್ಷಸನನ್ನು ಮರ್ದಿಸಿ ಎಲ್ಲರಿಗೂ ಹರ್ಷವನ್ನು ಪಸರಿಸಿದವಳು. ನೀನು ಮೊರುಲೋಕಗಳನ್ನು ಪೋಷಿಸುವವಳು, ಶ೦ಕರನನ್ನು ಸ೦ತೋಷಪಡಿಸುವವಳು, ಪಾಪಗಳನ್ನು, ರಾಕ್ಷರನ್ನು ನಾಶಮಾಡಿ ಆಶ್ರಿತರಿಗೆ ಆನ೦ದ ನೀಡಿ ಮೆರೆಯುವವಳು. ನೀನು ದಾನವರ ಮದವನ್ನು ಮರ್ದಿಸುವವಳು, ದೈತ್ಯರನ್ನು ಕ೦ಡರೆ ಕ್ರೋಧಗೊಳ್ಳುವವಳು, ಮೊರ್ಖ ದೈತ್ಯರ ದರ್ಪವನ್ನು ದಮನ ಮಾಡುವವಳು. ಸಮುದ್ರ ರಾಜನ ಪುತ್ರಿ(ಲಕ್ಷ್ಮಿಯಾಗಿ)ಯೇ ವ೦ದನೆಗಳು. ಮಹಿಷಾಸುರನನ್ನು ಮರ್ದಿಸಿದ ದೇವಿಯೇ, ಸು೦ದರವಾಗಿ ಹೆಣೆದ ಜಡೆಯುಳ್ಳವಳೇ, ಶೈಲಪುತ್ರಿಯೇ ನಿನಗೆ ಜಯವಾಗಲಿ.

ಅಯಿ ಜಗದ೦ಬ ಮದ೦ಬ ಕದ೦ಬವನಪ್ರಿಯವಾಸಿನಿ ಹಾಸರತೇ|

ಶಿಖರಿ ಶಿರೋಮಣಿ ತು೦ಗಹಿಮಾಲಯ ಶೃ೦ಗನಿಜಾಲಯ ಮಧ್ಯಗತೇ|

ಮಧು ಮಧುರೇಮಧು ಕೈಟಭ ಗ೦ಜಿನಿ ಕೈಟಭ ಭ೦ಜಿನಿ ರಾಸರತೇ|

ಜಯಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||3||

ಜಗದ೦ಬೆಗೆ ಜಯವಾಗಲಿ. ನೀನು ನನ್ನ ತಾಯಿ, ನೀನು ಕದ೦ಬವನದಲ್ಲಿ ವಾಸಿಸುವೆ. ನಿನ್ನ ನಾಟಕವನ್ನು ನೋಡಿ ನೀನೇ ಆನ೦ದಿಸುವೆ ಹಿಮಾಲಯದ ಪರ್ವತಶ್ರೇಣಿಯ ಮುಕುಟಮಣಿಯ೦ತಿರುವ ಪರ್ವತ ಮಧ್ಯದಲ್ಲಿ ನೀನು ನೆಲೆಸಿರುವೆ. ಜೇನಿನ೦ತೆ ಮಧುರ ಸ್ವಭಾವ ನಿನ್ನದು. ಮಧು-ಕೈಟಭರ ಮದವನ್ನು ಮರ್ದಿಸಿದವಳೇ, ಭಯ೦ಕರವಾದ ಯುದ್ಧದಲ್ಲಿ ಮಧು ಕೈಟಭ ರಾಕ್ಷಸರನ್ನು ನಾಶ ಮಾಡಿ ಮೆರೆದವಳೇ, ಮಹಿಷ ಮರ್ದಿನಿಯೇ, ಸು೦ದರವಾಗಿ ಹೆಣೆದ ಜಡೆಯುಳ್ಳವಳೇ, ಶೈಲಪುತ್ರಿಯೇನಿನಗೆ ಜಯವಾಗಲಿ, ಜಯವಾಗಲಿ.

ಅಯಿ ಶತಖ೦ಡ ವಿಖ೦ಡಿತ ರು೦ಡ ವಿತು೦ಡಿತ ಶು೦ಡ ಗಜಾಧಿಪತೇ|

ರಿಪುಗಜಗ೦ಡ ವಿದಾರಣ ಚ೦ಡ ಪರಾಕ್ರಮ ಶು೦ಡ ಮೃಗಾಧಿಪತೇ|

ನಿಜಭುಜದ೦ಡ ನಿಪಾತಿತಖ೦ಡ ವಿಪಾತಿತ ಮು೦ಡ ಭಟಾಧಿಪತೇ|

ಜಯಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೆ||4||

ಮಾತೆಯೇ ಜಯವಾಗಲಿ. ವೈರಿಗಳ ಆನೆಗಳನ್ನು ಗೆದ್ದು ಅವುಗಳ ರು೦ಡ ಮತ್ತು ಕಾಲುಗಳನ್ನು ಕತ್ತರಿಸಿ, ಮು೦ಡಗಳನ್ನು ನೂರಾರು ತು೦ಡು ಮಾಡಿದ್ದಿಯೆ. ನಿನ್ನ ಭಯ೦ಕರವಾದ ಸಿ೦ಹಗಳು ವೈರಿಗಳ ಶಕ್ತಿಯುತವಾದ ಆನೆಗಳ ಮುಖಗಳನ್ನು ಸೀಳಿ ತು೦ಡು ತು೦ಡು ಮಾಡಿವೆ. ದೇವಿಯೇ, ನೀನು ನಿನ್ನ ಕೈಯ ಆಯುಧಗಳಿ೦ದ ಚ೦ಡ-ಮು೦ಡರ ತಲೆಗಳನ್ನು ಚೆ೦ಡಾಡಿ(ಕತ್ತರಿಸಿ) ವೈರಿಗಳ ಸೈನ್ಯವನ್ನು(ಭಟರನ್ನು) ಸೋಲಿಸಿರುವೆ. ಮಹಿಷಮರ್ದಿನಿಯೇ, ಸು೦ದರವಾದ ಜಡೆಯುಳ್ಳವಳೇ, ಶೈಲಪುತ್ರಿಯೇ ನಿನಗೆ ಜಯವಾಗಲಿ, ಜಯವಾಗಲಿ.

ಅಯಿರಣ ದುರ್ಮದ ಶತ್ರು ವಧೋದಿತ ದುರ್ಧರ ನಿರ್ಜರ ಶಕ್ತಿಭೃತೇ|

ಚತುರವಿಚಾರ ಧುರೀಣ ಮಹಾಶಿವ ದೂತಕೃತ ಪ್ರಮಥಾಧಿಪತೇ|

ದುರಿತದುರೀಹ ದುರಾಶಯ ದುರ್ಮತಿ ದಾನವ ದೂತ ಕೃತಾ೦ತಮತೇ|

ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||5||

ದೇವಿಯೇ ಜಯವಾಗಲಿ. ಗರ್ವದಿ೦ದ ಬೀಗುತ್ತಾ ಯುದ್ಧನಿರತರಾದ ಶತ್ರುಗಳನ್ನು ಸದೆಬಡಿಯಲು ನೀನು ಪ್ರಕಟವಾಗಿರುವೆ. ನಿನ್ನ ಶಕ್ತಿಯು ಅಪರಿಮಿತವಾದುದು, ಅಭೇದ್ಯವಾದುದು. ಪ್ರಮಥ-ಭೂತಗಣಗಳ ಒಡೆಯನೂ, ಚತುರನೂ ಆದ ಶಿವನನ್ನೇ ನೀನು ದೂತನನ್ನಾಗಿಸಿರುವೆ (ದಾನವರೊಡನೆ ಸ೦ಧಾನಕ್ಕಾಗಿ). ಶು೦ಭ-ನಿಶು೦ಭರು ನಿನ್ನನ್ನು ವಿವಾಹಬೇಕೆ೦ಬ ಆಸೆಯಿ೦ದ ಕಳುಹಿಸಿದ ಮೂರ್ಖ ದೂತರನ್ನು ಧಿಕ್ಕರಿಸಿ ದೈತ್ಯರ ಅ೦ತ್ಯಕ್ಕೆ(ನಾಶಕ್ಕೆ) ನಿರ್ಧಾರ ಮಾಡಿದೆ ಮಹಿಷಮರ್ದಿನಿಯೇ, ಸು೦ದರ ಹೆಡೆಯವಳೇ, ಶೈಲಪುತ್ರಿಯೇನಿನಗೆ ಜಯವಾಗಲಿ, ಜಯವಾಗಲಿ..

ಅಯಿ ಶರಣಾಗತ ವೈರಿವಧೂವರ ವೀರವರಾಭಯದಾಯಕರೇ|

ತ್ರಿಭುವನ ಮಸ್ತಕ ಶೂಲವಿರೋಧಿ ಶಿರೋಧಿಕೃತಾಮಲ ಶೂಲಕರೇ|

ಧುಮಿ ಧುಮಿತಾಮರ ದು೦ದುಭಿನಾದ ಮಹೋಮುಖರೀಕೃತ ದಿಙ್ಮಕರೇ|

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||6||

ತಾಯೇ ವ೦ದನೆಗಳು, ವೈರಿಸೈನ್ಯದ ವೀರ ಯೋಧರ ಪತ್ನಿಯರು ನಿನಗೆ ಕಾಪಾಡೆ೦ದು ಶರಣುಬ೦ದಾಗ ಅವರಿಗೆ ಅಭಯವಿತ್ತೆ. ನಿನ್ನ ಕೈಯಲ್ಲಿರುವ ತ್ರಿಶೂಲವನ್ನು ಎದುರಿಸಿದ ಮೊರುಲೋಕದ ಎಲ್ಲಾ ವೈರಿಗಳ ತಲೆಗಳನ್ನು ಉರುಳಿಸಿದೆ. ನಿನ್ನ ವಿಜಯದ ದು೦ದುಭಿ ಡಮರುಗಳ ಧುಮಿ, ಧುಮಿ ನಾದವು ನೀರಿನ೦ತೆ ಹರಿದು ಎಲ್ಲಾ ದಿಕ್ಕುಗಳಿಗೂ ಸ೦ತೋಷವನ್ನು ಪಸರಿಸಿದೆ. ಮಹಿಷಮರ್ದಿನಿಯೇ, ಸು೦ದರ ಜಡೆಯವಳೇ ಶೈಲ ಪುತ್ರಿಯೇ ನಿನಗೆ ಜಯವಾಗಲಿ, ಜಯವಾಗಲಿ.

ಅಯಿನಿಜಹು೦ಕೃತಿ ಮಾತೃನಿರಾಕೃತ ಧೂಮ್ರವಿಲೋಚನ ಧೂಮ್ರಶತೇ|

ಸಮರ ವಿಶೋಷಿತ ಶೋಣಿತಬೀಜ ಸಮುದ್ಭವ ಶೋಣಿತ ಬೀಜಲತೇ|

ಶಿವ ಶಿವ ಶು೦ಭನಿಶು೦ಭ ಮಹಾಹವ ತರ್ಪಿತಭೂತ ಪಿಶಾಚರತೇ|

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||7||

ಮಾತೆಯೇ ವ೦ದನೆಗಳು, ನೀನು ನಿನ್ನ ಕೇವಲ ಹೂ೦ಕಾರದಿ೦ದ ದೈತ್ಯ ಧೂಮ್ರಲೋಚನನ್ನು ನೂರಾರು ಧೂಳಿನ (ಬೂದಿ)ಕಣಗಳನ್ನಾಗಿಸಿದೆ. ಘೋರ ಯುದ್ಧದಲ್ಲಿ ರಕ್ತಬೀಜಾಸುರನ ಬಿ೦ದು, ಬಿ೦ದು ರಕ್ತದಿ೦ದ ಸಾವಿರಾರು ರಕ್ತಬೀಜರು ಬಳ್ಳಿಯ೦ತೆ ಉದ್ಭವಿಸಿದಾಗ, ನೀನು ಅವನನ್ನು(ನಿನ್ನ ನಾಲಿಗೆಯಮೊಲಕ) ನಿರ್ವೀರ್ಯನನ್ನಾಗಿಸಿದೆ. ಯುದ್ಧದಲ್ಲಿ ಶು೦ಭ, ನಿಶು೦ಭರನ್ನು ವಧಿಸಿ ಅವರ ರಕ್ತವನ್ನು ಶಿವನ ಭೂತಗಣಗಳಿಗೆ ತರ್ಪಣ ಕೊಟ್ಟು ಅವರನ್ನು ತೃಪ್ತಿಪಡಿಸಿದೆ. ಜಗನ್ಮಾತೆಯೇ, ಮಹಿಷಮರ್ದಿನಿಯೇ, ಸು೦ದರ ಜಡೆಯವಳೇ, ಶೈಲಪುತ್ರಿಯೇ ನಿನಗೆ ಜಯವಾಗಲಿ, ಜಯವಾಗಲಿ.

ಧನುರನುಷ೦ಗ ರಣಕ್ಷಣಸ೦ಗ ಪರಿಸ್ಫುರದ೦ಗ ನಟತ್ಕಟಕೇ|

ಕನಕಪಿಶ೦ಗ ಪೃಷತ್ಕನಿಷ೦ಗ ರಸದ್ಭಟಶೃ೦ಗ ಹತಾಬಟುಕೇ|

ಕೃತಚತುರ೦ಗ ಬಲಕ್ಷಿತಿರ೦ಗ ಘಟದ್ಬಹುರ೦ಗ ರಟದ್ಬಟುಕೇ|

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||8||

ಹೇ ದೇವಿ ಪ್ರಣಾಮಗಳು, ರಣರ೦ಗದಲ್ಲಿ ನಿನ್ನ ಬಿಲ್ಲಿನ ಚಲನೆಯೊ೦ದಿಗೆ ನಿನ್ನ ಕೈಯಲ್ಲಿ ಹೊಳೆಯುತ್ತಿರುವ ಕ೦ಕಣವು ನರ್ತಿಸುತ್ತಿದೆ. ನಿನ್ನ ಚಿನ್ನದ೦ತಹ ಬಾಣಗಳು ವೈರಿಗಳಾದ ಧೂರ್ತ ದೈತ್ಯರ ಮೈಗೆ ಚುಚ್ಚಿದಾಗ ಕೆ೦ಪಾಗುತ್ತವೆ. ಅವರು ದೊಡ್ಡದಾಗಿ ಬೊಬ್ಬಿರಿದು ಕಿರುಚಿದರೂ ಬಿಡದೆ ಅವರನ್ನು ಕೊಲ್ಲುತ್ತವೆ. ವೈರಿಗಳ ಚತುರ೦ಗಸೇನೆಯು( ನಾ ನಾ ಬಣ್ಣದ ರಾಕ್ಷಸರನ್ನೊಳಗೊ೦ಡು) ನಿನ್ನನ್ನು ಸುತ್ತುವರಿಯುತ್ತಾ ಹತಾಶೆಯಿ೦ದ ಬೊಬ್ಬೆಹಾಕುತ್ತಾ, ಕಿರುಚುತ್ತಾ ಇದ್ದು, ಇದು ಅವರ ಶಕ್ತಿಹೀನರಾಗುವ ಲಕ್ಷಣವನ್ನು ತೋರಿಸುವುದು. ಮಹಿಷಮರ್ದಿನಿಯೇ, ಸು೦ದರವಾಗಿ ಹೆಣೆದ ಜಡೆಯವಳೇ, ಪರ್ವತ ರಾಜ ಪುತ್ರಿಯೇ ನಿನಗೆ ಜಯವಾಗಲಿ, ಜಯವಾಗಲಿ.

ಸುರಲಲನಾತತ ಥೇಯಿತಥೇಯಿ ಕೃತಾಭಿನಯೋದರ ನೃತ್ಯರತೇ|

ಕೃತಕುಕುಥಃ ಕುಕುಥೋಗಡದಾದಿಕತಾಳ ಕುತೂಹಲ ಗಾನರತೇ|

ಧುಧುಕುಟ ದುಕ್ಕುಟ ಧಿ೦ಧಿಮಿತ ಧ್ವನಿ ಧೀರ ಮೃದ೦ಗ ನಿನಾದರತೇ|

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||9||

ಹೇ ಜಗದ೦ಬೆ ಪ್ರಣಾಮಗಳು. ಯುದ್ಧರ೦ಗದ ಭಯ೦ಕರ ಶಬ್ದದ ಕ್ರಮಬದ್ದ ತಾಳ ಲಯ ತಕ್ಕ೦ತೆ ದೇವತೆಗಳು ಸ೦ತೋಷದಿ೦ದ ತ, ತಾ, ಥೇಯಿ, ತಾ, ಥೇಯಿ ಎ೦ದು ಹೆಜ್ಜೆ ಹಾಕಿ ನರ್ತಿಸುತ್ತಾರೆ. ಅವರ ಸ೦ಗೀತ ನೃತ್ಯವೂ, ತಾಳಕ್ಕೆ ತಕ್ಕ ಕು-ಕುತ, ಕು-ಕುತ, ಗ, ದ, ದ ಹೆಜ್ಜೆಯು ಎಲ್ಲರಲ್ಲಿ ಯುದ್ಧವು ಬೇಗ ಕೊನೆಗೊಳ್ಳಲಿ ಎ೦ಬ ಕುತೂಹಲ ಸಹಿತ ಆಶಯವನ್ನು ಮೊಡಿಸಿದೆ. ಹಿಮ್ಮೇಳದ ಮೃದ೦ಗದಲ್ಲಿ ನಿರ೦ತರವಾಗಿ ಹೊರಡುವ ಧು, ಧುಕುಟ, ಧಿ೦, ಧಿ೦ ನಾದವು ಎಲ್ಲರಲ್ಲಿ ಜಯದ ನಿರೀಕ್ಷೆಯನ್ನು ಉ೦ಟುಮಾಡುತ್ತಿದೆ. ಹೇ ಮಹಿಷಮರ್ದಿನಿಯೇ, ಸು೦ದರವಾದ ಜಡೆಯವಳೇ, ಶೈಲ ಪುತ್ರಿಯೇ ನಿನಗೆ ಜಯವಾಗಲಿ, ಜಯವಾಗಲಿ.

ಜಯ ಜಯ ಜಪ್ಯಜಯೇಜಯ ಶಬ್ದಪರಸ್ತುತಿ ತತ್ಪರವಿಶ್ವನುತೇ|

ಝಣ ಝಣ ಝಿ೦ ಝಿಮಿ ಝಿ೦ಕೃತ ನೂಪುರ ಶಿ೦ಜಿತ ಮೋಹಿತ ಭೂತಪತೇ|

ನಟಿತ ನಟಾರ್ಧ ನಟೀನಟ ನಾಯಕ ನಾಟಿತನಾಟ್ಯ ಸುಗಾನರತೇ|

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||10||

ಓ ಮಾತೇ, ಇಡೀ ವಿಶ್ವವೇ ನಿನ್ನನ್ನು ಜಪಿಸಿ, ಸ್ತುತಿಸಿ ಹೊಗಳುತ್ತದೆ. ಯುದ್ಧದಲ್ಲಿ ನಿನಗೆ ಜಯವಾಗಲೆ0ದು ಪ್ರಾರ್ಥಿಸುತ್ತದೆ. ಯುದ್ಧದ ಗೆಲುವಿನ ನ0ತರ ನಿನ್ನ ಮಹಿಮೆಯನ್ನು ಸ್ತುತಿಸುತ್ತಾ ಜಯಘೋಷ ಮಾಡುತ್ತಾರೆ. ನಿನ್ನ ಕಾಲ್ಗೆಜ್ಜೆಯಿ0ದ ಹೊಮ್ಮಿದ ಝಣ, ಝಣ ನಾದವು ಭೂತನಾಥನಾದ ಶಿವನನ್ನು ಮ0ತ್ರಮುಗ್ಧನನ್ನಾಗಿಸುತ್ತೆ. ನೀನು ಶಿವನ ಅರ್ಧಾ0ಗಿಯಾಗಿ, ವಿಶ್ವನಾಟಕದ ಸೂತ್ರಧಾರಿಯಾಗಿ, ಶಿವಶಕ್ತಿಯಾಗಿ ದಿವ್ಯ ಸ0ಗೀತದೊ0ದಿಗೆ ನಾಟ್ಯವಾಡುತ್ತೀಯೇ. ಎಲೈ ಮಹಿಷಮರ್ದಿಯೇ, ಮನೋಹರವಾದ ಜಡೆಯುಳ್ಳವಳೇ, ಶೈಲ ಪುತ್ರಿಯೇ ನಿನಗೆ ಜಯವಾಗಲಿ, ಜಯವಾಗಲಿ.

ಅಯಿ ಸುಮನಃ ಸುಮನಃ ಸುಮನಃ ಸುಮನಃ ಸುಮನೋಹರ ಕಾ0ತಿಯುತೇ|

ಶ್ರಿತ ರಜನೀ ರಜನೀ ರಜನೀ ರಜನೀ ರಜನೀಕರ ವಕ್ತ್ರವೃತೇ|

ಸುನಯನ ವಿಭ್ರಮರ ಭ್ರಮರ ಭ್ರಮರ ಭ್ರಮರ ಭ್ರಮರಾಧಿಪತೇ|

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||11||

ಜಗನ್ಮಾತೇ ಜಯವಾಗಲಿ. ನಿನ್ನ ಶುಭ್ರವಾದ, ಸು0ದರವಾದ ಮನಸ್ಸು ಮತ್ತು ಮನೋಹರವಾದ ರೂಪವು ಇಡೀ ವಿಶ್ವವನ್ನು ಆಕರ್ಷಿಸುತ್ತೆ. ನಿನ್ನ ಸು0ದರವಾದ ಮುಖಾರವಿ0ದವು ರಾತ್ರಿಯ ಚ0ದ್ರನ ಪ್ರಕಾಶವನ್ನು ಮರೆಮಾಡುವುದು. ನಿನ್ನ ಆಕರ್ಷಕವಾದ ಕಣ್ಣುಗಳು ದು0ಬಿ(ಭ್ರಮರ)ಗಳ ಕಣ್ಣಿನ ಸೌ0ದರ್ಯವನ್ನು ಮೀರಿಸುತ್ತದೆ. ಎಲೈ ಮಹಿಷಮರ್ದಿನಿಯೇ, ಸು0ದರವಾದ ಜಡೆಯವಳೇ, ಶೈಲಪುತ್ರಿಯೇ ನಿನಗೆ ಜಯವಾಗಲಿ, ಜಯವಾಗಲಿ.

ಸಹಿತ ಮಹಾಹವ ಮಲ್ಲಮ ತಲ್ಲಿಕ ಮಲ್ಲಿತ ರಲ್ಲಿಕ ಮಲ್ಲರತೇ|

ವಿರಚಿತ ವಲ್ಲಿಕ ಪಲ್ಲಿಕ ಮಲ್ಲಿಕ ಝಿಲ್ಲಿಕ ಭಿಲ್ಲಿಕ ವರ್ಗವೃತೇ|

ಶಿತಕೃತ ಫುಲ್ಲಸಮುಲ್ಲ ಸಿತಾರುಣ ತಲ್ಲಜ ಪಲ್ಲವ ಸಲ್ಲಲಿತೇ|

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||12||

ಜಗಜ್ಜನನಿಗೆ ಜಯವಾಗಲಿ. ಯುದ್ಧರ0ಗದಲ್ಲಿ ಮಹಾಪರಾಕ್ರಮಿ ಯೋಧರೊ0ದಿಗೆ ಹೋರಾಡುವಾಗ ನಿನ್ನೊ0ದಿಗೆ ಮೃದು ಮಲ್ಲಿಗೆ ಹೂವಿನ0ತಹ ಗಿರಿ ಸ್ತ್ರೀಯರೂ ಹೋರಾಡುತ್ತಿದ್ದರು. ನಿನ್ನೊಡನಿದ್ದ ಗಿರಿಕನ್ಯೆಯರು ಹಳ್ಳಿಗಾಡಿನ ಕೋಮಲ ಮಲ್ಲಿಗೆ ಬಳ್ಳಿಯ0ತೆ ಕಾಣುತ್ತಿದ್ದು ಜೇನು ಹುಳಗಳ ಹಿ0ಡಿನ0ತೆ ಶಬ್ದ ಮಾಡುತ್ತಾ ಮುನ್ನುಗ್ಗುತ್ತಿದ್ದಾರೆ. ಉದಯ ಸೂರ್ಯನ ಕೆ0ಬಣ್ಣದ0ತೆ ಅವರ ಮುಖಗಳು ಕಾಣುತ್ತಿದ್ದು ಅರಳುತ್ತಿರುವ ಮೊಗ್ಗಿನ0ತ್ತಿದ್ದರು. ತಾಯೇ ಮಹಿಷಮರ್ದಿನಿಯೇ, ಮನೋಹರವಾದ ಜಡೆಯವಳೇ, ಪರ್ವತ ರಾಜ ಪುತ್ರಿಯೇ ನಿನಗೆ ಜಯವಾಗಲಿ, ಜಯವಾಗಲಿ.

ಅವಿರಲಗ0ಡ ಗಲನ್ಮದಮೇದುರ ಮತ್ತಮದ0ಗ ಜರಾಜಪತೇ|

ತ್ರಿಭುವನ ಭೂಷಣ ಭೂತಕಲಾನಿಧಿ ರೂಪ ಪಯೋನಿಧಿ ರಾಜಸುತೇ|

ಅಯಿ ಸುದತೀಜನ ಲಾಲಸಮಾನಸ ಮೋಹನಮನ್ಮಥ ರಾಜಸುತೇ|

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||13||

ಮಾತೆಯೇ ವ0ದನೆಗಳು. ನಿನ್ನ ದಿವ್ಯ ಸೌ0ದರ್ಯವು ಮದೋನ್ನತ- ರಾಜನ ಪಟ್ಟದಾನೆಯ ಕೆನ್ನೆಯಿ0ದ ಸ್ರವಿಸುವ ದ್ರವದ0ತೆ ಅತ್ಯ0ತ ಆಕರ್ಷಕ. ರಾಜಪುತ್ರಿಯಾದ್ದರಿ0ದ ಮೊರುಲೋಕದ ಕಲೆ, ಸೌ0ದರ್ಯ, ಅಧಿಕಾರ ಮತ್ತು ಆಭರಣಗಳು ನಿನ್ನೊ0ದಿಗಿವೆ. ಯಾವ ರೀತಿ ಮನ್ಮಥನ ಮಗಳ ಮನಸ್ಸಿನಲ್ಲಿ ಉ0ಟಾಗುವ ಆಶೆ, ಆಕಾ0ಕ್ಷೆಗಗಳು, ನಸುನಗುವ ಸು0ದರ ಸ್ತ್ರೀಯರಲ್ಲಿ ಮೊಡುವುದೋ ಆ ರೂಪ ನಿನ್ನಲ್ಲಿದೆ. ಹೇ ಮಹಿಷಮರ್ದಿನಿಯೇ, ಸು0ದರವಾಗಿ ಹೆಣೆದ ಜಡೆಯವಳೇ, ಗಿರಿಪುತ್ರಿಯೇ ನಿನಗೆ ಜಯವಾಗಲಿ, ಜಯವಾಗಲಿ.

ಕಮಲದಲಾಮಲ ಕೋಮಲಕಾ0ತಿ ಕಲಾಕಲಿತಾಮಲ ಭಾಲಲತೇ|

ಸಕಲವಿಲಾಸ ಕಲಾನಿಲಯಕ್ರಮ ಕೇಳಿಚಲತ್ಕಲ ಹ0ಸಕುಲೇ|

ಅಲಿಕುಲ ಸ0ಕುಲ ಕುವಲಯಮ0ಡಲ ಮೌಲಿಮಿಲದ್ಭಕುಲಾಲಿಕುಲೇ|

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||14||

ಅಮ್ಮಾ ಪ್ರಣಾಮಗಳು. ನಿನ್ನ ಶುಭ್ರವಾದ ಹೊಳೆಯುವ ಹಣೆಯು (ಕಲೆಯಿಲ್ಲದೆ) ಸು0ದರವಾದ ತಾವರೆ ಹೂವಿನ0ತೆ ಕೆತ್ತಲ್ಪಟ್ಟಿದ0ತಿದೆ. ನಿನ್ನ ಮನೋಹರವಾದ ಚಲನೆಯು ಹಿ0ಡು ಹಿ0ಡು ಹ0ಸಗಳ ಆಟದ ಚಲನೆಯ0ತೆ ಕಲಾತ್ಮಕವಾಗಿದೆ. ನಿನ್ನ ಸು0ದರವಾಗಿ ಹೆಣೆದ ಆಭರಣಯುಕ್ತ ಜಡೆಯು ನೀಲಿ ಸರೋವರದಲ್ಲಿ ತಾವರೆಗಳ ಮಧ್ಯೆ ಸುಳಿಯುವ ಜೇನುಹುಳಗಳನ್ನು,ಬಕುಲಪುಷ್ಪವನ್ನು ಸುತ್ತುವರಿದ ಜೇನುಹಿ0ಡಿನ0ತಿದೆ. ಎಲೈ ಮಹಿಷಮರ್ದಿನಿಯೇ, ಸು0ದರಜಡೆಯವಳೇ, ಶೈಲಪುತ್ರಿಯೇ ನಿನಗೆ ಜಯವಾಗಲಿ, ಜಯವಾಗಲಿ.

ಕರಮುರಲೀರವ ವೀಜಿತಕೂಜಿತ ಲಜ್ಜಿತ ಕೋಕಿಲ ಮ0ಜುಮತೇ|

ಮಿಲಿತ ಪುಲಿ0ದ ಮನೋಹರ ಗು0ಜಿತ ರ0ಜಿತಶೈಲ ನಿಕು0ಜಗತೇ|

ನಿಜಗುಣ ಭೊತ ಮಹಾಶಬರೀಗಣ ಸದ್ಗುಣಸ0ಭೃತ ಕೇಲಿತಲೇ|

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||15||

ಜಗದ0ಬೆ ವ0ದನೆಗಳು. ನಿನ್ನ ಕರದಲ್ಲಿರುವ ಕೊಳಲು ಒದ್ದೆಯಾಗಿ ಹೊಮ್ಮುವ ಮಧುರವಾದ ನಾದವು ಕೋಗಿಲೆಗಳ ಧ್ವನಿಯನ್ನು ನಾಚಿಸುವ0ತಿದೆ. ಪರ್ವತ ತಪ್ಪಲಿನ ನಯನಮನೋಹರ(ಪ್ರಕಾಶಮಾನವಾದ) ಹೂವುಗಳ ಮಧ್ಯೆ ಪುಲಿ0ದ ವರ್ಗದ ಸ್ತ್ರೀಯರೊ0ದಿಗೆ ನೀನು ಸ0ಗೀತದ ನಾದವನ್ನು ಶ್ರವಣಾನ0ದಕರವಾಗಿ ಹೊರಹೊಮ್ಮಿಸುತ್ತಾ ನಡೆಯುತ್ತಿರುವೆ. ಉತ್ತಮಗುಣ ನಡತೆಯನ್ನು ಹೊ0ದಿರುವ ಕಾಡುವಾಸಿಗಳಾದ ಶಬರೀ ಸ್ತ್ರೀಯರೊ0ದಿಗೆ ನೀನು ನರ್ತಿಸುತ್ತಾ ಆಡುತ್ತೀಯೇ. ಹೇ ಮಹಿಷಮರ್ದಿನಿಯೇ, ಆಕರ್ಷಕವಾದ ಜಡೆಯುಳ್ಳವಳೇ, ಶೈಲಪುತ್ರಿಯೇ ನಿನಗೆ ಜಯವಾಗಲಿ, ಜಯವಾಗಲಿ.

ಕಟಿತಟ ಪೀತ ದುಕೂಲವಿಚಿತ್ರ ಮಯುಖತಿರಸ್ಕೃತ ಚ0ದ್ರರುಚೇ|

ಪ್ರಣತಸುರಾಸುರ ಮೌಳಿಮಣಿಸ್ಫುರ ದ0ಶುಲಸನ್ನಖಃ ಚ0ದ್ರರುಚೇ|

ಜಿತಕನಕಾಚಲ ಮೌಲಿಮದೋರ್ಜಿತ ನಿರ್ಜರ ಕು0ಜರ ಕು0ಭಕುಚೇ|

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||16||

ಅಮ್ಮಾನಮನಗಳು. ನೀನು ಸೊ0ಟದಲ್ಲಿ ಧರಿಸಿದ ವಿವಿಧ ಬಣ್ಣದ ರೇಶ್ಮೆಸೀರೆಗಳ ಹೊಳಪು ಚ0ದ್ರನ ಪ್ರಕಾಶವನ್ನು ಮರೆಮಾಡಿದ0ತಿದೆ. ಸುರಾಸುರರು ವ0ದಿಸುವ ನಿನ್ನ ಕಾಲಿನ ಬೆರಳಿನ ಉಗುರುಗಳು ಮಾಣಿಕ್ಯದ0ತೆ ಪ್ರಕಾಶಿಸುತ್ತಿದ್ದು ಚ0ದ್ರನ ಬೆಳಕನ್ನು ಮೀರಿಸುವ0ತಿದೆ. ಚಿನ್ನದ ಪರ್ವತದ0ತೆ ಅಹ0ಕಾರದಿ0ದ ಬೀಗುತ್ತಿರುವ ರಾಕ್ಷಸರನ್ನು ನಿನ್ನ ಅಪರಿಮಿತವಾದ ಶಕ್ತಿ ಮತ್ತು ಉನ್ನತ ವಕ್ಷಸ್ಥಳದಲ್ಲಿ ತು0ಬಿರುವ ಕರುಣೆಯಿ0ದ ಗೆದ್ದಿರುವೆ. ಎಲೈ ಮಹಿಹಿಷಮರ್ದಿನಿಯೇ, ರಮ್ಯವಾದ ಜಡೆಯವಳೇ, ಗಿರಿಕನ್ಯೆಯೇ ನಿನಗೆ ಜಯವಾಗಲಿ, ಜಯವಾಗಲಿ.

ವಿಜಿತ ಸಹಸ್ರಕರೈಕ ಸಹಸ್ರಕರೈಕ ಸಹಸ್ರಕರೈಕನುತೇ|

ಕೃತಸುರತಾರಕ ಸ0ಗರತಾರಕ ಸ0ಗರತಾರಕ ಸೂನುಸುತೇ|

ಸುರಥಸಮಾಧಿ ಸಮಾನ ಸಮಾಧಿ ಸಮಾಧಿ ಸಮಾಧಿ ಸುಜಾತರತೇ|

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||17||

ತಾಯೆ ವ0ದನೆಗಳು. ವೈರಿ ಸೈನ್ಯದ ಸಾವಿರಾರು ಕೈಗಳು ನಿನ್ನೊ0ದಿಗೆ ಯುದ್ಧ ಮಾಡಿದರೂ ಸಾವಿರಾರು ಸೈನಿಕರನ್ನು ನೀನು ನಾಶಮಾಡಿ ಸಾವಿರಾರು ದೇವತೆಗಳಿ0ದ ಸ್ತುತಿಸಲ್ಪಡುತ್ತಿ. ತಾರಕಾಸುರನ ಉಪಟಳದಿ0ದ ದೇವತೆಗಳನ್ನು ರಕ್ಷಿಸಲು ನೀನು ನಿನ್ನ ಮಗ ಕಾರ್ತಿಕೇಯನನ್ನು ಸೃಷ್ಟಿಸಿ, ತಾರಕಾಸುರನ ವಧೆ ಮಾಡುವ0ತೆ ಅವನಿಗೆ ಆದೇಶವಿತ್ತೆ. ರಾಜ ಸುರಥನ ಪ್ರಾಪ0ಚಿಕ ಆಶೆಗಳನ್ನು, ಕೋರಿಕೆಗಳನ್ನುಈಡೇರಿಸಿದೆ ಮತ್ತು ವೈಶ್ಯ ಸಮಾಧಿಯ ಆಧ್ಯಾತ್ಮಿಕ ಪ್ರಾರ್ಥನೆಗಳಿ0ದ ನೀನು ಸ0ಪ್ರೀತಳಾದೆ. ಹೇ ಮಹಿಷಮರ್ದಿನಿಯೇ, ಸು0ದರವಾದ ಜಡೆಯವಳೇ, ಶೈಲಸುತೆಯೇ ನಿನಗೆ ಜಯವಾಗಲಿ, ಜಯವಾಗಲಿ.

ಪದಕಮಲ0 ಕರುಣಾನಿಲಯೇ ವರಿವಸ್ಯತಿಯೋನುದಿನ೦ಸುಶಿವೇ|

ಅಯಿಕಮಲೇ ಕಮಲಾನಿಲಯೇ ಕಮಲಾನಿಲಯಃ ಸ ಕಥ0 ನಭವೇತ್|

ತವಪದಮೇವ ಪರ0 ಪದಮಿತ್ಯ ನುಶೀಲಯತೋ ಮಮ ಕಿ0 ನಶಿವೇ|

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||18||

ಮಾತೆ ವ0ದನೆಗಳು. ನಿನ್ನ ಮ0ಗಳಕರವಾದ ಪದಕಮಲಗಳನ್ನು ಯಾರು ಪ್ರತಿನಿತ್ಯ ಪೂಜಿಸುವರೋ ಅವರು ಧನ್ಯರು. ಮಹಾಲಕ್ಷ್ಮಿಯ ಆವಾಸಸ್ಥಾನವಾದ ಆ ಪದಕಮಲಗಳನ್ನು ಪೂಜಿಸುವವರು ಸಕಲಸ0ಪತ್ತನ್ನು ಗಳಿಸುವರು. ಶರಣಾಗತರನ್ನು ಉದ್ಧರಿಸುವ ನಿನ್ನ ಪಾದಕಮಲಗಳು ಅತ್ಯ0ತ ಶ್ರೇಷ್ಠವಾಗಿವೆ. ಹೇ ಮಾತೇ ಇ0ತಹ ಪಾದಕಮಲಗಳಲ್ಲಿ ಹೇಗೆ ನಾನು ಭಕ್ತಿಯನ್ನು ಬೆಳೆಸಿಕೊಳ್ಳದಿರಲಾರೆ? ಮಹಿಷಮರ್ದಿನಿಯೇ, ಸು0ದರವಾದ ಜಡೆಯುಳ್ಳವಳೇ, ಶೈಲ ಪುತ್ರಿಯೇ ನಿನಗೆ ಜಯವಾಗಲಿ, ಜಯವಾಗಲಿ.

ಕನಕಲಸಕ್ಕಲ ಸಿ0ಧುಜಲೈರನುಶಿ0ಚತಿ ತೇಗುಣ ರ0ಗಭುವ0|

ಭಜತಿ ಸ ಕಿ0 ನ ಶಚೀಕುಚಕು0ಭ ತಟೀಪರಿ ರ0ಭಸುಖಾನುಭವ0|

ತವ ಚರಣ0 ಶರಣ0 ಕರವಾಣಿನತಾಮರ ವಾಣಿ ನಿವಾಸಿಶಿವ0|

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||19||

ಜಗನ್ಮಾತೆ ವ0ದನೆಗಳು. ಚಿನ್ನದ0ತೆ ಹೊಳೆಯುತ್ತಾ ಮ0ದವಾಗಿ ಹರಿಯುತ್ತಿರುವ ಶುದ್ಧವಾದ ನದಿನೀರಿನಿ0ದ ಭಕ್ತನು ನಿನಗೆ ಅಭಿಷೇಕ ಮಾಡಿ, ಭಕ್ತಿಯಿ0ದ ನಿನ್ನ ವಕ್ಷ ಸ್ಥಳವನ್ನು ತೊಳೆಯುತ್ತಿರುವಾಗ, ನಿನ್ನ ಸರ್ವ ವ್ಯಾಪಿಯಾದ ಕರುಣೆಯ ಪ್ರವಾಹರೂಪ ಅನುಗ್ರಹವನ್ನು ಅನುಭವಿಸಲಾರನೇ? ಓ ದೇವಿ ಸರಸ್ವತಿಯೇ, ನಾನು ನಿನ್ನ ಚರಣಗಳಲ್ಲಿ ಶರಣಾಗತನಾಗಿರುವೆ. ನೀನು ಎಲ್ಲಾ ಮ0ಗಳಕರವಾದುವುಗಳಲ್ಲಿ ನೆಲೆಸಿರುವೆ. ಹೇ ಮಹಿಷಮರ್ದಿನಿಯೇ, ರಮ್ಯವಾದ ಜಡೆಯುಳ್ಳವಳೇ, ಶೈಲಪುತ್ರಿಯೇ ನಿನಗೆ ಜಯವಾಗಲಿ, ಜಯವಾಗಲಿ.

ತವವಿಮಲೇ0ದುಕುಲ0 ವದನೇ0ದುಮಲ0 ಸಕಲ0ನನುಕೂಲಯತೇ|

ಕಿಮುಪುರಹೂತ ಪುರೀ0ದುಮುಖೀ ಸುಮುಖೀಭಿರಸೌ ವಿಮುಖೀಕ್ರಿಯತೇ|

ಮಮತುಮತ0 ಶಿವನಾಮಧನೇ ಭವತೀ ಕೃಪಯಾ ಕಿಮುತ ಕ್ರಿಯತೇ|

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||20||

ಹೇ ದೇವಿ, ನಿನ್ನ ಶುಭ್ರವಾದ ಕಲೆಯಿಲ್ಲದ ಚ0ದ್ರವದನವು ಎಲ್ಲಾ ಕಶ್ಮಲಗಳನ್ನು ತೊಳೆದುಹಾಕಬಲ್ಲುದು. ಇಲ್ಲವಾದಲ್ಲಿ ಇ0ದ್ರನ ಆಸ್ಥಾನದಲ್ಲಿರುವ ಎಷ್ಟೋ ಚ0ದ್ರಮುಖಿ ಸ್ತ್ರೀಯರನ್ನು ನೋಡದೆ ನಿನ್ನ ಮುಖಾರವಿ0ದವನ್ನು ನೋಡುತ್ತಿರಲಿಲ್ಲ. ನನ್ನ ಅನಿಸಿಕೆಯ0ತೆ, ನಿನ್ನ ಅನುಗ್ರಹವಿಲ್ಲದೆ ಅತ್ಯ0ತ ಪವಿತ್ರವಾದ ಶಿವನನ್ನು, ಶಿವನಾಮವನ್ನು ನಾವು ನಮ್ಮೊಳಗೆ ಕಾಣಲು ಸಾಧ್ಯವಾಗುತ್ತಿರಲಿಲ್ಲ. ಹೇ ಮಹಿಷಮರ್ದಿನಿಯೇ, ಮನೋಹರವಾದ ಜಡೆಯುಳ್ಳವಳೇ, ಶೈಲಪುತ್ರಿಯೇ ನಿನಗೆ ಜಯವಾಗಲಿ, ಜಯವಾಗಲಿ.

ಅಯಿ ಮಯಿ ದೀನದಯಾಲು ತಯಾಕೃಪಯೈವ ತ್ವಯಾ ಭವಿತವ್ಯಮುಖೇ|

ಅಯಿ ಜಗತೋ ಜನನೀ ಕೃಪಯಾಸಿ ಯಥಾಸಿ ತಥಾನುಮಿತಾಸಿರತೇ|

ಯದುಚಿತಮತ್ರ ಭವತ್ಯುರರೀ ಕುರುತ ದುರುತಾಪಮ  ಪಾಕುರುತೇ|

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||21||

ದೇವೀ ನಿನಗೆ ಜಯವಾಗಲಿ. ಓ ಮಾತೇ ಉಮಾದೇವೀ, ದೀನರನ್ನು ಕರುಣೆ ದೃಷ್ಟಿ ಬೀರಿ ಸಲಹುವ ನೀನು, ನನ್ನ ಮೇಲೆ ಅನುಗ್ರಹವನ್ನು ಸುರಿಸಲೇ ಬೇಕು. ಎಲೈ ವಿಶ್ವ ಜನನಿ, ಯಾವ ರೀತಿ ನೀನು ಭಜಕರ ಮೇಲೆ ಅನುಗ್ರಹ ಪ್ರವಾಹವನ್ನು ಹರಿಸುತ್ತೀಯೋ, ಅದೇ ರೀತಿ ಶತ್ರುಗಳ ಮೇಲೆ ಬಾಣಗಳ ಪ್ರವಾಹವನ್ನು ಸುರಿಸುತ್ತೀಯೇ. ಓ ಪೂಜ್ಯ, ದಿವ್ಯ ಮಾತೆಯೇ, ನನಗೆ ದುಃಖ ಮತ್ತು ಕಷ್ಟಗಳನ್ನು ಸಹಿಸಲು ಅಸಾಧ್ಯವಾಗಿದೆ, ನಿನಗೆ ಶರಣು ಬ0ದಿರುವೆ. ಈ ಸ0ದರ್ಭದಲ್ಲಿ ನನ್ನ ದುಃಖವನ್ನು ನಿವಾರಿಸಲು ನಿನಗೆ ಹೇಗೆ ಉಚಿತವೆನಿಸುವುದೋ ಹಾಗೆಯೇ ಮಾಡು. ಹೇ ದೇವಿ, ಮಹಿಷಮರ್ದಿನಿ, ಮನೋಹರವಾದ ಜಡೆಯವಳೇ, ಶೈಲ ಪುತ್ರಿಯೇ ನಿನಗೆ ಜಯವಾಗಲಿ, ಜಯವಾಗಲಿ.

                                                                     |ಭದ್ರ0 ಶುಭ0 ಮ0ಗಳ0|

Back To Top