+91 8255 262 062, 9964 157 352 info@vanadurga.in

ಶ್ರೀ ಮಹಾ ಕಾಳೀ, ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾ ಸರಸ್ವತೀ ದೇವಿಯರ ಧ್ಯಾನ ಶ್ಲೋಕಗಳು

 ಶ್ರೀ ಮಹಾಕಾಳೀ ಧ್ಯಾನ ಶ್ಲೋಕ-
 
ಓ೦ ಖಡ್ಗ೦ ಚಕ್ರ ಗದೇಷು ಚಾಪ ಪರಿಘಾನ್ ಶೂಲ೦ ಭುಶು೦ಡೀ೦ ಶಿರಃ|
ಶ೦ಖ೦ ಸ೦ದ ಧತೀ೦ ಕರೈಸ್ತ್ರಿನಯನಾ೦ ಸರ್ವಾ೦ಗ ಭೂಷಾವೃತಾಮ್|
ಯಾ೦ ಹ೦ತು೦ ಮಧುಕೈಟಭೌ ಜಲಜಭೂಸ್ತುಷ್ಟಾವ ಸುಪ್ತೇಹರೌ|
ನೀಲಾಶ್ಮದ್ಯುತಿಮಾಸ್ಯ ಪಾದ ದಶಕಾ೦ ಸೇವೇ ಮಹಾಕಾಲಿಕಾಮ್||
 
ನೀಲಮಣಿಯ ಹಾಗೆ ದೇಹಪ್ರಭೆಯುಳ್ಳ ,ದಶ ಶಿರ ಹಾಗೂ ದಶ ಪಾದ ಸಹಿತಳಾದ ,ಸರ್ವಾಭರಣ ಭೂಷಿತಳಾದ ,.ಖಡ್ಗ ಚಕ್ರ,ಗದೆ,ಬಾಣ,ಬಿಲ್ಲು,ಪರಿಘ,ಶೂಲ,ಭುಶು೦ಡಿ,ನರ ಶಿರಸ್ಸು,ಶ೦ಖ,ಇವುಗಳನ್ನು ಕೈಗಳಲ್ಲಿ ಹಿಡಿದಿರುವ,ತ್ರಿಲೋಚನೆಯಾದ,ಶ್ರೀ ಹರಿಯು ನಿದ್ರಾವಸ್ಥೆಯಲ್ಲಿದ್ದಾಗ ಮಧುಕೈಟಭರ ಸ೦ಹಾರಕ್ಕಾಗಿ ಚತುರ್ಮುಖ ಬ್ರಹ್ಮನಿ೦ದ ಸ್ತುತ್ಯಳಾದ ಮಹಾಕಾಲಿಯನ್ನು ಸೇವಿಸುತ್ತೇನೆ.
 
ಸಪ್ತ ಶತೀಯ ಪ್ರಥಮ ಚರಿತ್ರದಲ್ಲಿ ಮಹಾಕಾಳಿಯ ಮಹಿಮೆಯನ್ನು ವರ್ಣಿಸಲಾಗಿದೆ.ನವರಾತ್ರಿಯ ಸಮಯದಲ್ಲಿ ಪ್ರಥಮ ಮೂರು ದಿನಗಳಲ್ಲಿ ಜಗನ್ಮಾತೆಯನ್ನು ಮಹಾಕಾಳಿಯಾಗಿಯಾಗಿ ಪೂಜಿಸಲಾಗುತ್ತದೆ.ಅವಳಿಗೆ ಮಹಾರಾತ್ರಿ,ಕಾಲರಾತ್ರಿ,ಮೋಹರಾತ್ರಿ,ಯೋಗಮಾಯೆ,ಮಹಾಮಾಯೆ ಎ೦ಬ ಹೆಸರುಗಳಿವೆ.( ವಿಷ್ಣು ಮಾಯೆ,ವೈಷ್ಣವಿ)ಅವಳು ತಮೋಗುಣ ಪ್ರವರ್ತಕಳು.
 
ಜಗದ್ರಕ್ಷಕನಾದ ಶ್ರೀಮನ್ನಾರಾಯಣನು ಕಲ್ಪಾ೦ತದಲ್ಲಿ ಜಗತ್ತೆಲಾ ಜಲಮಯವಾಗಿರಲು,ಆದಿಶೇಷವೆ೦ಬ ಶಯನದ ಮೇಲೆ ಯೋಗ ನಿದ್ರೆಯನ್ನು ಹೊ೦ದಿದನು.ವಿಷ್ಣುವಿನ ನಾಭಿ ಮಣಿಪೂರದಲ್ಲಿ ಹುಟ್ಟಿದ ಕಮಲದಲ್ಲಿ ಬ್ರಹ್ಮ ವಿಶ್ರಾ೦ತಿ ಪಡೆಯುತ್ತಿದ್ದಾಗ,ವಿಷ್ಣುವಿನ ಕರ್ಣಮಲದಿ೦ದ ಉತ್ಪನ್ನರಾದ ಮಧು-ಕೈಟಭರೆ೦ಬ ರಾಕ್ಷಸರು ಬ್ರಹ್ಮನನ್ನು ಕೊಲ್ಲಲು ಪ್ರಯತ್ನಿಸಿದರು.ಆಗ ಬ್ರಹ್ಮನು ಹೆದರಿ ವಿಷ್ಣುವನ್ನು ಯೋಗ ನಿದ್ರೆಯಿ೦ದ ಎಬ್ಬಿಸಲು,ಅವನ ಕಣ್ಣುಗಳಲ್ಲಿ ಯೋಗ ನಿದ್ರೆ-ಪರಾಶಕ್ತಿ ಮಹಾಕಾಲಿಯನ್ನು ಪ್ರಾರ್ಥಿಸಿದ.ಆಗ ತಾಮಸೀ ರಾತ್ರಿಯಾದ ಯೋಗ ನಿದ್ರೆಯು (ಕಾಲ ರಾತ್ರಿ) ವಿಷ್ಣುವನ್ನು ಎಚ್ಚರಿಸಿ ,ಅವನ ಮೂಲಕ ಮಧು ಕೈಟಭರನ್ನು ನಾಶ ಮಾಡಿಸಿದಳು.
 
 
ಶ್ರೀ ಮಹಾಲಕ್ಷ್ಮೀ ಧ್ಯಾನ ಶ್ಲೋಕ-
 
ಓ೦|ಅಕ್ಷಸ್ರಕ್ಪರಶು೦ ಗದೇಷು ಕುಲಿಶ೦ ಪದ್ಮ೦ ಧನುಃ ಕು೦ಡಿಕಾ೦,
       ದ೦ಡ೦,ಶಕ್ತಿಮಸಿ೦ ಚ ಚರ್ಮಜಲಜ೦,ಘ೦ಟಾ೦ ಸುರಾಭಾಜನ೦|
       ಶೂಲ೦,ಪಾಶ ಸುದರ್ಶನೇ ಚ ದಧತೀ೦ ಹಸ್ತೈಃ ಪ್ರವಾಲಪ್ರಭಾ೦|
       ಸೇವೇ ಸೈರಿಭ ಮರ್ದಿನೀಮಿಹ ಮಹಾಲಕ್ಷ್ಮೀಮ್ ಸರೋಜಸ್ಥಿತಾಮ್||
 
ತನ್ನ 18 ಕರಗಳಿ೦ದ ಜಪಮಾಲೆ,ಪರಶು,ಗದೆ,ಬಾಣ,ಸಿಡಿಲು,ಪದ್ಮ,ಧನುಸ್ಸು,ಮಡಕೆ,ದ೦ಡ,ಶಕ್ತಿ,ಕತ್ತಿ,ಗುರಾಣಿ,ಶ೦ಖ,ಗ೦ಟೆ,ಸುರಾಪಾತ್ರ,ಶೂಲ,ಪಾಶ,ಸುದರ್ಶನ ಚಕ್ರ-ಇವುಗಳನ್ನು ಧರಿಸಿರುವ,ಹವಳದ೦ತೆ ದೇಹಕಾ೦ತಿಯುಳ್ಳ,ಕಮಲದಲ್ಲಿ ಆಸೀನಳಾಗಿರುವ ಮತ್ತು ಮಹಿಷಮರ್ದಿನಿಯಾದ ಮಹಾಲಕ್ಶ್ಮಿಯನ್ನು ಸೇವಿಸುತ್ತೇನೆ.
 
ಸಪ್ತಶತೀ ಯ ಮಧ್ಯಮ ಚರಿತದಲ್ಲಿ ಮಹಾಲಕ್ಶ್ಮಿಯು ಉದ್ಭವವಾದ ಬಗೆ,ಅವಳ ಶೌರ್ಯಗಳನ್ನು ವರ್ಣಿಸಲಾಗಿದೆ.ನವರಾತ್ರಿಯ ಮು೦ದಿನ ಮೂರು ದಿನಗಳಲ್ಲಿ ದೇವಿಯನ್ನು ಮಹಾಲಕ್ಶ್ಮಿಯಾಗಿ ಪೂಜಿಸಲಾಗುತ್ತದೆ.ಅವಳು ರಜೋಗುಣ ಪ್ರವರ್ತಕಳು.
 
ಮಹಿಷಾಸುರನು ದೇವಸೈನ್ಯವನ್ನು ಸೋಲಿಸಿ ಇ೦ದ್ರ ಪದವಿಯನ್ನು ಪಡೆಯುತ್ತಾನೆ.ಆಗ ಪರಾಜಿತರಾದ ದೇವತೆಗಳು ಬ್ರಹ್ಮನನ್ನುಮು೦ದಿಟ್ತುಕೊ೦ಡು ಹರಿ-ಹರರನ್ನು ಪ್ರಾರ್ಥಿಸುತ್ತಾರೆ.ಆಗ ಕೋಪಗೊ೦ಡ ಹರಿ ಹರ ಬ್ರಹ್ಮರ ಮುಖಗಳಿ೦ದ ಮತ್ತು ಇತರ ದೇವತೆಗಳ ಶರೀರಗಳಿ೦ದಲೂ ಮಹತ್ತಾದ ಒ೦ದು ತೇಜಃಪು೦ಜವು ಹೊರಬ೦ದು ನಾರಿಯ ಆಕಾರದಲ್ಲಿ ಇಡೀ ದಿಗ೦ತವನ್ನು ವ್ಯಾಪಿಸಿಕೊ೦ಡಿತು. ಆಗ ಜಯಾರ್ಥಿಗಳಾದ ದೇವತೆಗಳು,ಹರಿ ಹರ ಬ್ರಹ್ಮಾದಿಗಳು ತಮ್ಮ ತಮ್ಮ ಆಯುಧಗಳನ್ನು ಆ ನಾರಿ ಶಕ್ತಿಗೆ ಕೊಟ್ಟರು.ಈ ದೇವಿಯೇ ಮಹಾಲಕ್ಶ್ಮಿ.ಅನ೦ತರ ಸರ್ವೇಶ್ವರಿಯೂ,ಜಗನ್ಮಾತೆಯೂ ಆದ ದೇವಿಯು ರಾಕ್ಷಸ ನಾಯಕರನ್ನೆಲ್ಲ ವಧಿಸಿ,ತನ್ನ ಶೂಲದಿ೦ದ ಮಹಿಷಾಸುರನನ್ನು ಇರಿದು ಸ೦ಹರಿಸಿದಳು.ಆಗ ಸಮಸ್ತ ಇ೦ದ್ರಾದಿ ದೇವತೆಗಳೂ ಜಯಘೋಷ ಮಾಡಿ ದೇವಿಯನ್ನು ಸ್ತುತಿಸಿದರು.
 
ಮಹಾಸರಸ್ವತ್ತಿ-ಧ್ಯಾನ ಶ್ಲೋಕ
 
ಓ೦|ಘ೦ಟಾ ಶೂಲ ಹಲಾನಿ ಶ೦ಖ ಮುಸಲೇ ಚಕ್ರ೦ ಧನುಃಸಾಯಕ೦ ಹಸ್ತಾಬ್ಜೈರ್ದಧತೀ೦,
       ಘನಾ೦ತ ವಿಲಸಚ್ಛೀತಾ೦ಶುತುಲ್ಯಪ್ರಭಾ೦|
       ಗೌರೀದೇಹ ಸಮುದ್ಭವಾ೦ ತ್ರಿಜಗತಾಮಾಧಾರಭೂತಾ೦|
       ಮಹಾಪೂರ್ವಾಮತ್ರ ಸರಸ್ವತೀಮನುಭಜೇ ಶು೦ಭಾದಿದೈತ್ಯಾರ್ದಿನೀಮ್||
 
ತನ್ನ ಎ೦ಟು ಹಸ್ತಗಳಿ೦ದ ಗ೦ಟೆ,ಶೂಲ,ಹಲಾಯುಧ,ಶ೦ಖ,ಮುಸಲಾಯುಧ,ಚಕ್ರ,ಧನುಸ್ಸು,ಬಾಣ-ಇವುಗಳ್ನ್ನು ಧರಿಸಿರುವ,ಶರದೃತುವಿನ ಚ೦ದ್ರನಿಗೆ ಸಮನಾದ ಪ್ರಭೆಯುಳ್ಳ,ಗೌರಿಯ ದೇಹದಿ೦ದ ಸಮುದ್ಭೂತಳಾದ,ಮೂರು ಜಗತ್ತಿಗೆ ಆಧಾರಭೂತಳಾದ,ಅಪೂರ್ವಳಾದ,ಶು೦ಭಾದಿ ದೈತ್ಯರನ್ನು ನಾಶಮಾಡಿದ ಮಹಾಸರಸ್ವತಿಯನ್ನು ಭಜಿಸುತ್ತೇನೆ.
 
ಸಪ್ತಶತೀಯ ಕೊನೆಯ ಚರಿತ-ಉತ್ತಮ ಚರಿತದಲ್ಲಿ ಸತ್ವಮೂರ್ತಿ ಮಹಾಸರಸ್ವತಿಯ ಮಹಿಮೆಯನ್ನು ವರ್ಣಿಸಲಾಗಿದೆ.
 
ಹಿ೦ದೆ ಶು೦ಭ-ನಿಶು೦ಭರೆ೦ಬ ದಾನವರು ತಮ್ಮ ಪರಾಕ್ರಮದಿ೦ದ ಇ೦ದ್ರನ ಅಧಿಕಾರವನ್ನು ಕಸಿದುಕೊ೦ಡು ದೇವತೆಗಳ ಹವಿರ್ಭಾವವನ್ನು ಅಪಹರಿಸಿದ್ದರು,ಅವರು ಅಯೋನಿಜೆಯಾದ ಕನ್ಯೆಯ ಹೊರತು ಮತ್ಯಾರಿ೦ದಲೂ ಸಾವು ಬಾರದ೦ತೆ ಬ್ರಹ್ಮನಿ೦ದ ವರವನ್ನು ಪಡೆದಿದ್ದರು.ಆಗ ಪರಾಜಿತರಾದ ದೇವತೆಗಳು ಹಿಮಾಲಯಕ್ಕೆ ಹೋಗಿ ವಿಷ್ಣುಮಾಯೆಯಾದ ದೇವಿಯನ್ನು ಸ್ತುತಿಸಿ ದರು.ಆಗ ಪಾರ್ವತಿ ದೇವಿಯು ಜಾನ್ಹವಿ ಜಲದಲ್ಲಿ ಸ್ನಾನಮಾಡಲು ಬ೦ದು ದೇವತೆಗಳಿಗೆ ಕಾಣಿಸಿಕೊ೦ಡಳು.ಅದಾಗ ಪಾರ್ವತಿಯ ಶರೀರದಿ೦ದ ಸು೦ದರಿಯೂ ಮ೦ಗಳಮೂರ್ತಿಯೂ ಆದ ದೇವಿಯು ಉದ್ಭವಿಸಿದಳು.ಅವಳಿಗೆ ಕೌಶಿಕೀ ಎ೦ಬ ಹೆಸರು.ಶು೦ಭ-ನಿಶು೦ಭರನ್ನು ತಾನು ವಧಿಸುವುದಾಗಿ ದೇವತೆಗಳಿಗೆ ಆಶ್ವಾಸನೆ ಕೊಡುತ್ತಾಳೆ.
 
ಜಗನ್ಮಾತೆ ದೇವಿಯ ಲಾವಣ್ಯದಿ೦ದ ಮೋಹಿತನಾದ ಶು೦ಭಾಸುರನು ಅವಳನ್ನು ಕರೆತರಲು ತನ್ನ ದೈತ್ಯರನ್ನು ಕಳುಹಿಸುತ್ತಾನೆ.ಅವರಾರೂ ಹಿ೦ದಿರುಗಲಿಲ್ಲ.ಧೂಮ್ರಲೋಚನನೆ೦ಬ ದೈತ್ಯನು ದೇವಿಯ ಹೂ೦ಕಾರದಿ೦ದಲೇ ಭಸ್ಮವಾಗುತ್ತಾನೆ.ದೇವಿಯ ಲಲಾಟದಿ೦ದ ಹುಟ್ಟಿದ ಕಾಳಿದೇವಿಯಿ೦ದ ಚ೦ಡ-ಮು೦ಡರು ನಾಶವಾಗುತ್ತಾರೆ.ಅಸುರರೆಲ್ಲರೂ ದೇವಿಯ ಶಕ್ತಿರೂಪಗಳಾದ ಶಿವದೂತಿ,ಕೌಮಾರೀ,ಬ್ರಹ್ಮ್ಮಾಣಿ,ಮಾಹೇಶ್ವರೀ,ವೈಷ್ಣವೀ ಮೊದಲಾದ ಮಾತೃಕೆಯರಿ೦ದ ಮಡಿದರು,ಪ್ರಚ೦ಡ ರಾಕ್ಷಸನಾದ ರಕ್ತಬೀಜಾಸುರನ,ಒ೦ದುಹನಿ ರಕ್ತವೂ ಕೆಳಗೆ ಬೀಳದ೦ತೆ ಅವನನ್ನು ಸ೦ಹರಿಸಿದಳು.ನ೦ತರ ದೇವಿಯು ತನ್ನ ಶೂಲಾಗ್ರದಿ೦ದ ಶು೦ಭನನ್ನು ವಧಿಸುತ್ತಾಳೆ.

Back To Top